Thursday, July 24, 2008

ಕಥೆ ಒಂದು: ಸಂಚಿಕೆ ೧.

ರಾತ್ರಿ ೯ ಘಂಟೆ. ಸುಮಾರು ೨೦ ಅಡಿ ಅಗಲ ರಸ್ತೆ ಅದು. ರಸ್ತೆಯ ಎರಡು ಬದಿಯಲ್ಲೂ ಕೊಚ್ಚಿಕೊಂಡು ಹೋಗುತ್ತಿರುವ ಮಣ್ಣು-ನೀರಿನ ಸಂಕರ ಪ್ರವಾಹ, ಸಂಜೆಯಿಂದ ಅಸ್ಖಲಿತವಾಗಿ ಬಿಡುವಿಲ್ಲದೆ ಸುರಿಯುತ್ತಿದ್ದ ಮುಂಗಾರಿನಿಂದ. ಇಂಥಹ ಮಳೆಯಲ್ಲೂ ಮರಗಳ ಮಧ್ಯೆ ಆಗಾಗ ಕಣ್ಣಿಗೆ ಬೀಳುತ್ತಿದ್ದ ದೀಪದ ಹುಳಗಳು ಬೆಳದಿಂಗಳ ಕಪ್ಪು-ನೀಲಿ ಆಕಾಶದಲಿ ಸುಸುರ್ಬತ್ತಿಯ ಕಿಡಿಯಂತೆ ಕಾಣಿಸುತ್ತಿತ್ತು. ಶಾಲು ಒಂದನ್ನು ತಲೆ ಹಾಗು ಭುಜಕ್ಕೆ ಸರಳಿ ಸುತ್ತಿಕೊಂಡು ಅದನ್ನು ಎಡಗೈಯಿ೦ದ ಕುತ್ತಿಗೆಗೆ ಒತ್ತಿ ಬಲಗೈಯಲ್ಲಿ ಛತ್ರಿಯನ್ನು ಕಷ್ಟಪಟ್ಟು ಗಾಳಿಗೆ ಅಲ್ಲಾಡದ೦ತೆ ಹಿಡಿದುಕೊ೦ಡು ಓಡುತ್ತ ಮನೆಗೆ ಹೊರಟ ಗಿರಿಧರ. ಆಗ್ಗಾಗ ಹಿ೦ದಿನಿ೦ದ ಪಾ೦ವ್ ಎ೦ದು ಕೇಳಿಸಿದ ಕೂಡಲೆ ಒ೦ದು ಕ್ಷಣ ಪಕ್ಕಕ್ಕೆ ಸರಿಯುತ್ತಿದ್ದ. ಶಬ್ದ ಕೇಳಿದರೆ ಮಾತ್ರ ಸರಿಯುತ್ತಿದ್ದ - ಕೆಲವರು ಪಕ್ಕದಿಂದ ದಾಟಿ ಹೋಗುತ್ತಿದ್ದರು.

ಗಡಿಯಾರದತ್ತ ನೋಡುತ್ತಲೇ ಅವನ ತೋಟದ ಸುತ್ತಲಿನ ಬೇಲಿಯ ಕಡೆಗೆ ತಿರುಗಿ, ಮರದ ಟೊಂಗೆಗಳಿ೦ದ ಸೃಷ್ಟಿಸಿದ ಹೊರಬಾಗಿಲನ್ನು ತೆಗೆದು, ತಿರುಗಿ ಚಿಲಕವನ್ನು ಹಾಕಿ ತೋಟದ ಕಾಣಿಸದ ಕಾಲುದಾರಿಯ ಮೇಲೆ ಓಡಿ ಮನೆಯ ಬಾಗಿಲ ಬಳಿ ಬಂದನು.